ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನದಲ್ಲಿ ನಾಯಕನ ಆರಾಧನೆ

ಲೇಖಕರು :
ವಿಠ್ಠಲ ಭ೦ಡಾರಿ
ಶುಕ್ರವಾರ, ಜನವರಿ 24 , 2014

ಕೆಲದಿನಗಳ ಹಿಂದೆ ಕುಮಟಾದಲ್ಲಿ ಜರುಗಿದ್ದ ಯಕ್ಷಗಾನ ಪ್ರದರ್ಶವೊಂದಕ್ಕೆ ಹೋಗಿದ್ದೆ . ಆಗ ಆಲ್ಲಿ ಆಟ ಪ್ರದರ್ಶನಗೊಂಡ ಬಗೆ ಅಲ್ಲಿಯ ಪ್ರೇಕ್ಷಕ ವರ್ಗದ ನಡವಳಿಕೆಯನ್ನು ನೋಡಿ ನಿಜಕ್ಕೂ ಬೆಚ್ಚಿ ಬಿದ್ದೆ ! ತಮ್ಮ ನೆಚ್ಚಿನ ನಟನ ಪ್ರತಿ ಕುಣಿತಕ್ಕೂ ಪ್ರತಿ ನಿಮಿಷವೂ ಅವರು ಚೀರುತ್ತಿದ್ದ ರೀತಿ ಉಳಿದ ಯಾವ ಪಾತ್ರಗಳನ್ನೂ ನೋಡಲು ಕೇಳಲು ಕೊಡದ ನೀತಿ ಅಭಿಮಾನಿಗಳ ಮಾಫಿಯಾವನ್ನು ನೆನಪಿಗೆ ತರುತ್ತಿತ್ತು. ಅವರನ್ನು ಆ ರೀತಿ ಪ್ರೇರಿಸುತ್ತಿದ್ದ, ಚೀರುವಿಕೆಯಿಂದ ಪುಳಕಗೊಳ್ಳುವ ಕಲಾವಿದರು ಕಲೆಯ ಶವ ಪೆಟ್ಟಿಗೆಯ ಮೊಳೆಯಂತಿದ್ದರು. ಯಕ್ಷಗಾನದ ಇಂದಿನ ಸಂದರ್ಭವನ್ನು ಹತ್ತಿರದಿಂದ ಬಲ್ಲವರಿಗೆ ಈ ಮಾತು ಅರ್ಥವಾಗುತ್ತದೆ! ಬೆಂಗಳೂರಿನ ಕೆಲ ಚಲನಚಿತ್ರ ಗೃಹಗಳಲ್ಲಿ ಡಾ. ರಾಜಕುಮಾರರ ಚಿತ್ರಗಳನ್ನು ನೋಡು ವಾಗ ಅಲ್ಲಿನ ಕೆಲ ಪ್ರೇಕ್ಷಕರ ನಡವಳಿಕೆ ಹೀಗೇ ಇರುತ್ತದೆ! ಅಲ್ಲಿ ಶಾಂತವಾಗಿ ಚಲನಚಿತ್ರ ನೋಡುವುದೇ ಅಸಾಧ್ಯ. ಅಲ್ಲಿಗೆ ಮತ್ತು ಇಲ್ಲಿಗೆ ವ್ಯತ್ಯಾಸ ಒಂದಿದೆ! ಅಲ್ಲಿ ಪರದೆಯ ಮೇಲೆ ತನ್ನ ನಾಯಕನನ್ನು ನೋಡುತ್ತಿದ್ದಂತೆ ಚಿಲ್ಲರೇ ನಾಣ್ಯ ಎಸೆದರೆ ಇಲ್ಲಿ ಎಸೆದಿಲ್ಲ ಅಷ್ಟೆ! ಪ್ರೇಕ್ಷಕರ ಅಸಹನೀಯ ಗದ್ದಲದಿಂದಾಗಿ ಪ್ರದರ್ಶನದಿಂದ ಅರ್ಧಕ್ಕೆ ವಾಪಸಾಗಬೇಕಾಯಿತು.

ಹೀಗೆ ಪ್ರೇಕ್ಷಕರಿಂದ ಅಭಿಮಾನದ ರೂಪದಲ್ಲಿ ವ್ಯಕ್ತಗೊಳ್ಳುವ ಈ ಬಗೆಯ ನಡವಳಿಕೆ ಯಕ್ಷಗಾನದಲ್ಲಿ ನಾಯಕನ ಆರಾಧನೆ ಕುರಿತು ಚಿಂತಿಸುವುದಕ್ಕೆ ಕಾರಣ. ಯಕ್ಷರಂಗದಲ್ಲಿ ತಾರೆಗಳ ಉದಯ, ಅವರ ಜವಾಬ್ದಾರಿ ರಹಿತ ನಡತೆ, ಪ್ರೇಕ್ಷಕರ ಅತಿರೇಕ ವರ್ತನೆಗಳು, ಇವೆಲ್ಲವುಗಳಿಂದ ಕಲೆಯ ಮೇಲಾಗುವ ಪರಿಣಾಮದ ಕುರಿತು ಆ ಕ್ಷಣದ ಅನಿಸಿಕೆಗಳನ್ನಷ್ಟೆ ದಾಖಲಿಸುತ್ತಿದ್ದೇನೆ. ನಾನು ಅತೀವವಾಗಿ ಪ್ರೀತಿಸುತ್ತಿರುವ ಕಲಾ ವ್ಯವಹಾರವೊಂದರ ವ್ಯಾಕರಣವೇ ವ್ಯತ್ಯಯವಾಗಿ ಹೋಗುತ್ತಿರುವ ದಿಗ್ಭ್ರಮೆಯಲ್ಲಿ..............

ಸಾ೦ಧರ್ಭಿಕ ಚಿತ್ರ
ಯಕ್ಷಗಾನವೊಂದು ಸಾಮುದಾಯಿಕ ಕಲೆ. ಸೆಮಿಕ್ಲಾಸಿಕ್ ರೂಪ ತಳೆದಿದ್ದರೂ ತನ್ನ ಸಂವಹನದ ಶಕ್ತಿಯಲ್ಲಿ ಸಮ್ಮೋಹಕತೆಯಲ್ಲಿ ಜಾನಪದ ವೈಲಕ್ಷಣವನ್ನು ಗರ್ಭದಲ್ಲಿರಿಸಿಕೊಂಡ ಕಲಾ ಪ್ರಕಾರ. ಸಾಮೂಹಿಕ ನಿರ್ವಹಣೆಯ ಮೂಲಕವೇ ಅದರ ಪರಿಣಾಮ ಸಿದ್ದಿಸುತ್ತದೆ. ಹಾಗಾಗಿ ಈ ಪ್ರದರ್ಶನಾತ್ಮಕ ಕಲೆಗೆ, ಚಲನಚಿತ್ರದಲ್ಲಿರುವಂತಹ, ಕಂಪನಿ ನಾಟಕಗಳಲ್ಲಿ ಕಂಡುಬರುವಂತಹ ತಾರೆಗಳ ಅವಶ್ಯಕತೆ ಇಲ್ಲ. ನಾಯಕನ ಆರಾಧನೆಯಿಂದ ವ್ಯಕ್ತಿಪೂಜೆ ಆರಂಭವಾಗುತ್ತದೆ. ಕಲಾವಿದ ಆ ಕಲಾ ಪ್ರಕಾರಗಳಿಂದ ಹೊರನಿಂತು, ವೈಯಕ್ತಿಕವಾಗಿ ಕಾಣಿಸಿಕೊಳ್ಳುವ, ಪ್ರತ್ಯೇಕಗೊಳ್ಳುವ ವ್ಯವಹಾದಲ್ಲಿ ಈ ತಾರೆಗಳ ಅಸ್ತಿತ್ವ. ಆದರೆ ಯಕ್ಷಗಾನ ಕಲಾವಿದ ವ್ಯವಹರಿಸುವುದು ಆ ಪ್ರಕಾರ(ಖಿಥಿಠಿಜ) ದ ಮೂಲಕವಾಗಿ ಆದ್ದರಿಂದಲೇ ಈ ತಾರೆಗಳು ಯಕ್ಷಗಾನದ ಪರಿಣಾವನ್ನೇ ಹದಗೆಡಿಸುವಲ್ಲಿ ಕಾರಣರಾಗುತ್ತಾರೆ!

ಬಹುಶಹ ಟೆಂಟ್ಮೇಳಗಳ ಆವಿಷ್ಕಾರದೊಂದಿಗೆ ಅಂದರೆ ಕಲೆಯೊಂದು ಪೂರ್ಣಪ್ರಮಾಣದಲ್ಲಿ ಉದ್ದಿಮೆಯಾದನಂತರ ಈ ತಾರಾಮೌಲ್ಯ ಪ್ರಚಲಿತಕ್ಕೆ ಬಂದಿತು ಅನಸುತ್ತದೆ. ಆರಾಧನೆಯ ಹೊರತಾದ ಪ್ರದರ್ಶನ ತನ್ನ ಪ್ರದರ್ಶನೀಯತೆಯಿಂದಲೇ ಪ್ರೇಕ್ಷರನ್ನು ಸೆರೆ ಹಿಡಿಯಬೇಕಾಗಿರುವುದರಿಂದ ಸಹಜವಾಗಿ ಕೆಲವು ಪ್ರೇಕ್ಷಣೀಯ ಅಂಶಗಳನ್ನು ಗುರುತಿಸಿ, ಟೆಂಟ್ ಯಜಮಾನ ಅವುಗಳನ್ನು ಕ್ಯಾಶ್ ಮಾಡಿಕೊಳ್ಳತೊಡಗಿದ. ಈ ಹಿನ್ನಲೆಯಲ್ಲಿಯೇ ಇಂತಹ ಪಾತ್ರ ಇಂಥವರೇ ನಿರ್ವಹಿಸುವರೆಂಬ ಪ್ರಚಾರ, ಅದನ್ನು ನೋಡಲೆಂದೇ ಪ್ರೇಕ್ಷಕರು ಬರುವಂತೆ ಮಾಡಲಾಯಿತು. ಇದೇ ಮುಂದೆ ಪಟ್ಟಭದ್ರತೆ, ಕಲಾವಿದರ ಬೆಳವಣಿಗೆಯ ಸ್ಥಗಿತತೆ ಇವೆಲ್ಲಕ್ಕೂ ಕಾರಣವಾಯಿತು.

ಕಲಾವಿದನ ಸ್ವಗತದಲ್ಲಿ ಯಕ್ಷ ಕಲಾವಿದ ಜಲವಳ್ಳಿ ವೆಂಕಟೇಶರು ಈ ಕುರಿತು ಮಾತನಾಡುತ್ತ -

ಆಟವೇ ಪ್ರಧಾನವಾಗಿದ್ದಾಗ ಒಬ್ಬ ಕಲಾವಿದ ಎರಡು-ಮೂರು ಪಾತ್ರಗಳನ್ನು ನಿಭಾಯಿಸುತ್ತಿದ್ದ.... ಇಂಥ ಪಾತ್ರ ಇಂಥವರೇ ಮಾಡಬೇಕೆಂಬ ಮೀಸಲಾತಿ ಇರುತ್ತಿರಲಿಲ್ಲ. ಸಂದಭರ್ಾನುಸಾರ ಆಯಾ ಪಾತ್ರಗಳನ್ನು ಮಾಡುವ ಅವಕಾಶ ಸಿಗುತ್ತಿತ್ತು. ಇದರಿಂದ ಒಬ್ಬ ಕಲಾವಿದ ಪೂರ್ಣ ಪ್ರಮಾಣದಲ್ಲಿ ರೂಪುಗೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಇಂದು ಹೀಗಿಲ್ಲ ಎನ್ನುತ್ತಾರೆ. ಕಲೆಕ್ಷನ್ ಮಾತ್ರ ಪ್ರಧಾನವಾಗಿರುವ ಉದ್ದೇಶದ ಪ್ರದರ್ಶನದಲ್ಲಿ ಇದಕ್ಕೆ ವ್ಯತಿರಿಕ್ತವಾದ ಅನುಭವ ಸಹಜವಾಯಿತು.

ಜಲವಳ್ಳಿ ವೆಂಕಟೇಶ ರಾವ್
ಕಾಲದ ಹೋಯ್ಲಿಗೆ ಸಿಕ್ಕ ಯಾವ ಕಲೆಯಾದರೂ ತನ್ನ ಮೂಲ ಸ್ವರೂಪದಲ್ಲಿ ಉದ್ದೇಶದಲ್ಲಿ ವ್ಯತ್ಯಯ ಇಲ್ಲದಂತೆ ಮುಂದುವರಿಯಲು ಸಾಧ್ಯವಿಲ್ಲ. ಈ ಕುರಿತು ನಾವು ಸಿನಿಕರಾಗಬೇಕಿಲ್ಲ. ಆದರೆ ಇದೇ ಕಾರಣಕ್ಕೆ ಕಲಾ ಸಂಸ್ಥೆ ಪ್ರೇಕ್ಷಕರ ಅಭಿರುಚಿಯನ್ನೇ ಕೆಡಿಸದಿರುವ ವಿವೇಕ ಬೆಳಸಿಕೊಳ್ಳಬೇಕಾದ ಬಗ್ಗೆ ಚಿಂತಿಸಬೇಕಾಗಿದೆ. ಅದರಲ್ಲೂ ಸೂಕ್ಷ್ಮರೂ, ಸಂವೇದಿಗಳೂ ಅನ್ನಿಸಿಕೊಂಡ ಕಲಾವಿದರು ಈ ಹೋಯ್ಲಿನಲ್ಲಿ ತಾವೇ ಸೆಳೆದು ಹೋಗುತ್ತ ತಮ್ಮ ಅಸ್ತಿತ್ವನ್ನು ಪ್ರತ್ಯೇಕವಾಗಿ ಕಾಣಿಸಿ ಚಪ್ಪಾಳೆಗಾಗಿಯೇ ರಂಗದ ಮೇಲೆ ಬದುಕುವ ರೀತಿ ಶೋಚನೀಯ ಎನಿಸಿಬಿಡುತ್ತದೆ.

ಈ ಹಿಂದೆ ಕೆಲವು ಕಲಾವಿದರು ತಮ್ಮ ಪ್ರತಿಭೆ ಮತ್ತು ಅವಕಾಶಗಳಿಂದಾಗಿ ಯಕ್ಷಗಾನದಲ್ಲಿ ನಾಯಕಮಣಿಗಳಾಗಿ ಕಂಗೊಳಿಸಿದ್ದಿದೆ. ಆದರೆ ವಿವಿಧ ಪಾತ್ರಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಒಟ್ಟು ಪರಿಣಾಮದಲ್ಲಿ ಯಕ್ಷಗಾನದ ಪ್ರಕಾರ ದಿಂದ ಬೇರೆಡೆ ಫ್ರೇಂ ಆಗದಿರುವಿಕೆ, ಅವರನ್ನು ತಾರೆಗಳನ್ನಾಗಿಸಲಿಲ್ಲ.

ಈ ಸಂದರ್ಭದಲ್ಲಿ ಕೆ.ವಿ.ಅಕ್ಷರ ಅವರು ರಂಗ ಪ್ರಪಂಚ ಪುಸ್ತಕದಲ್ಲಿ ಉಲ್ಲೇಖಿಸಿದ 18ನೇ ಶತಮಾನದಲ್ಲಿಯ ನಾಟಕ ರಂಗಭೂಮಿಯ ತಾರಾ ಮೌಲ್ಯದ ಉದಯ ಮತ್ತು ಕಲೆಯ ಅವನತಿ ಬಗೆಗಿನ ದಾಖಲೆಗಳನ್ನು ಹೋಲಿಕೆಗಾಗಿ ಇಲ್ಲಿ ನೀಡುತ್ತಿದ್ದೇನೆ. ಪ್ರೇಕ್ಷಕರು ನಾಟಕ ನೋಡಲಿಕ್ಕಾಗಿ ಹೋಗದೆ ತಮ್ಮ ನೆಚ್ಚಿನ ನಟರನ್ನು ನೋಡಲಿಕ್ಕಾಗಿ ಹೋಗುತ್ತಿದ್ದರು.... ನಟ ತನ್ನ ದೇಹ ಧ್ವನಿ ಮಾತುಗಳನ್ನು ಪ್ರೇಕ್ಷಕರಿಗೆ ಆಕರ್ಷಕವೆನಿಸುವ ಹಾಗೆ, ಚಾಣಾಕ್ಷವೆನಿಸುವ ಹಾಗೆ ಬಳಸಿಕೊಳ್ಳತಿದ್ದ. ಇಂಥ ಒಂದೊಂದು ಅಭಿನಯ ಭಾಗವನ್ನು ಮುಗಿಸುತ್ತಲೂ ಪ್ರೇಕ್ಷರಿಂದ ಕರತಾಡತನವನ್ನು ಸ್ವೀಕರಿಸಿ ಆಮೇಲೆ ಮುಂದಿನ ಭಾಗಕ್ಕೆ ಹೋಗುತ್ತಿದ್ದ...

ನಮ್ಮ ಯಕ್ಷ ತಾರೆಗಳು ಸಹ ಹೀಗೆಯೇ ಬಾವ ಕೈಯ ಮುಗಿವೆ........ ಎಂಬ ಪದ್ಯವನ್ನು ಭಾಗವತರು ಹಾಡುತ್ತಿದ್ದರೆ ನೆಲಕ್ಕೆ ತಲೆ ಹೊಸೆಯುವವರೆಗೂ ಬಗ್ಗಿ, ಚಪ್ಪಾಳೆ ಬಿದ್ದ ಮೇಲೆಯೇ ತಲೆ ಎತ್ತುತ್ತಾರೆ. ಉಂಡ ಮೊಲೆಯ ಮರೆತು .......... ಪದಾಭಿನಯದಲ್ಲಿ ಮೊಲೆಯನ್ನು ವಿಕೃತವಾಗಿ ತೋರುತ್ತ ಪದ್ಯದ ಧ್ವನಿಯನ್ನೆ ಗ್ರಹಿಸದೇ ಚಪ್ಪಾಳೆ ಬೀಳುವವರೆಗೂ ಕುಣಿಯುತ್ತಾರೆ. ಒಂದು ಪ್ರದರ್ಶನ ಮುಗಿಯುವ ಹೊತ್ತಿಗೆ ಇಂತಹ ಹಲವು ಹತ್ತು ಉದಾಹರಣೆಗಳನ್ನು ಯಾರು ಬೇಕಾದರು ಗುರುತಿಸಬಹುದು, ಅದರಲ್ಲೂ ಇಂತಹ ಅಭಿನಯಗಳು ತುಂಬಾ ರೂಕ್ಷವಾಗಿ ಅಭಿನಯಿಸಲ್ಪಡುತ್ತವೆ; ಕಂಪನಿ ನಾಟಕದ ಅನೌಚಿತ್ಯ ಹಾಸ್ಯಗಳಿಗಿಂತ ಕಡೆಯಾಗಿ........... ಅರ್ಥ ಸಂವಹನದ ಗರಿಷ್ಟ ಸಾಧ್ಯಗಳಿಗಾಗಿ ಬಳಕೆಯಾಗುವ ಪುನಾರಾಭಿನಯ ಪರಂಪರೆ ಇಂಥವರ ಕೈಗೆ ಸಿಕ್ಕು ಹೇಗೆ ವಿರೂಪಗೊಳ್ಳುತ್ತಿದೆ ಎಂಬುದನ್ನು ಇಂಥ ಉದಾಹರಣೆಗಳಲ್ಲಿ ಚೆನ್ನಾಗಿ ಗಮನಿಸಬಹುದು.

ಅಕ್ಷರ ಅವರು ಅದೇ ಲೇಖನದಲ್ಲಿ ಹೇಳಿದ ಈ ಹೇಳಿಕೆಯನ್ನು ಗಮನಿಸಿ. ನಾಟಕ ರಂಗದ ನಟರ ಅಸಾಧಾರಣ ಪ್ರಸಿದ್ದಿಯೇ ಆ ಶತಮಾನದ ನಾಟಕ ಸಾಹಿತ್ಯಕ್ಕೆ ಮುಳುವಾಯಿತು. ನಟ ತನ್ನನ್ನು ನೋಡಲೆಂದು ಬಂದ ಪ್ರೇಕ್ಷಕನಿಗಾಗಿಯೇ ತನ್ನ ಅಭಿನಯವನ್ನು ಒಗ್ಗಿಸಿಕೊಂಡಿದ್ದ. ಮ್ಯಾನೇಜರರು ತನ್ನ ಕಂಪನಿ ನಟನಿಗೆ ಹೊಂದುವಂತೆ ಏಕವ್ಯಕ್ತಿ ಪ್ರಧಾನ ನಾಟಕಗಳನ್ನು ಬರೆಸಿ ಆಡುತ್ತಿದ್ದರು.

ಹದಿನೆಂಟನೇ ಶತಮಾನದ ಈ ರಂಗ ಇತಿಹಾಸದ ದಾಖಲೆ ಇಂದಿನ ಯಕ್ಷಗಾನ ಕಂಪನಿಗಳಿಗೆ ಎಷ್ಟು ಚೆನ್ನಾಗಿ ಅನ್ವಯವಾಗುತ್ತದೆ ಗಮನಿಸಿ. ಮುಖ್ಯವಾಗಿ ಚಿಂತಿಸ ಬೇಕಾದದ್ದು ಇದು - ಇದನ್ನೆಲ್ಲ ತುಂಬಾ ಖುಷಿಯಿಂದ ಅನುಭವಿಸುವ ನಟ ತಾನು ಬೆಳೆಯುವುದಿಲ್ಲ. ಪಾತ್ರಕ್ಕಿಂತ ನಟನೇ ಪ್ರಧಾನನಾದಲ್ಲಿ ಪಾತ್ರಕ್ಕೆ ಹೊಂದುವಂತೆ ನಟ ಬದಲಾಗುವುದಿಲ್ಲ.

ಈ ಅಚ್ಚಿನ ಅಭಿನಯದ ನಟರು, ಅವರ ಏಕವ್ಯಕ್ತಿ ಪ್ರಧಾನ ಪ್ರಸಂಗ ಪ್ರದರ್ಶನ, ಈ ಪ್ರದರ್ಶನಗಳು ಸೃಷ್ಟಿಸಿದ ಶಿಳ್ಳೆ ಪ್ರೇಕ್ಷಕರು - ಇಲ್ಲದರಿಂದ ಆಟ ನೋಡುವುದು ಒಂದು ಅನುಭವವಾಗಿ ಮಾರ್ಪಡುವುದು ಸಾಧ್ಯವೇ? ಇದರಲ್ಲಿ ಯಾರ್ಯಾರ ಕೊಡುಗೆ ಎಷ್ಟೆಷ್ಟಿದೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬಹುದೇ .



ಕೃಪೆ : http://rv-mane.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ